ಕ್ಷೇತ್ರದ ಬಗ್ಗೆ
ಗಗನ ಚುಂಬಿ ಪರ್ವತ ಶಿಖರ ಸಾಲುಗಳನ್ನೊಳಗೊಂಡು ಉತ್ತರದಿಂದ ದಕ್ಷಿಣಕ್ಕೆ ಉದ್ದಕ್ಕೂ ಚಾಚಿದ ಪಶ್ಚಿಮ ಘಟ್ಟಗಳ ಸಾಲು. ಈ ಪರ್ವತ ತಪ್ಪಲು ತಗ್ಗು ತಗ್ಗುತ್ತಾ ಹೋಗಿ ಚಿಕ್ಕ ಚಿಕ್ಕ ಗುಡ್ಡಗಳಾಗಿ ಕರಾವಳಿಯವರೆಗೆ ಹಬ್ಬಿ ಕೊನೆಗೆ ಅರಬೀ ಕಡಲಿನ ಬಂಡೆಗಳಲ್ಲಿ ಲೀನವಾಗಿದೆ. ಪಶ್ಚಿಮ ಘಟ್ಟದಿಂದ ಕಡಲತಡಿ ವರೆಗೆ ಹಬ್ಬಿದ ಈ ಸಹ್ಯಾದ್ರಿ ಸಂಪದವೇ ತುಳುನಾಡು, ಈ ಸಹ್ಯಾದ್ರಿ ಪರ್ವತ ಪಂಕ್ತಿ ಹರಡಿದಲ್ಲೆಲ್ಲಾ ಏರು-ತಗ್ಗು ಕಡಿದಾದ ಬೆಟ್ಟಗಳು, ಜೋಡುವಲ್ಲಿ ಕಣಿವೆಗಳು, ತಪ್ಪಲಲ್ಲಿ ದಟ್ಟ ಅರಣ್ಯಗಳು. ಜನ ವಸತಿ ಬೆಳೆದು ಕಣಿವೆಗಳೆಲ್ಲ ಹುಲುಸಾದ ಆಡಿಕೆ-ತೆಂಗು ತೋಟಗಳಾಗಿವೆ, ಭತ್ತದ ಗದ್ದೆಗಳಾಗಿವೆ. ಈ ಕೃಷಿ ಭೂಮಿಗೆ ನೀರುಣಿಸಲು ಶಿಖರಗಳಿಂದ ಇಳಿದು ಬರುವ ತೊರೆಗಳು, ಏತ್ತರದಿಂದ ಕೆಳಗೆ ಧುಮುಕುವ ಅಬ್ಬಿಗಳು ನೋಡುಗರ ಕಣ್ಣುಗಳನ್ನು ತಂಪುಗೊಳಿಸುತ್ತವೆ.
ಇಂತಹ ಪರ್ವತ ಪಂಕ್ತಿಯೊಂದು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನೆಟ್ಟಾರಿನಿಂದ ತೊಡಗಿ ಬಾಯಂಬಾಡಿ ಪಾಲ್ತಾಡಿಯವರೆಗೂ ಹಬ್ಬಿದೆ. ಈ ವಲಯದ ಮಧ್ಯಭಾಗದೇ ನಳೀಲು. ಪರ್ವತ ಪಂಕ್ತಿಯ ಸೆರಗೊಂದು ಕೆಳಗಿಳಿದು ಬಯಲಾದ ಪುಣ್ಯಸ್ಥಳದಲ್ಲಿ ನಾಗರೂಪೀ ಸುಬ್ರಹ್ಮಣ್ಯ ನೆಲೆಯಾಗಿದ್ದಾನೆ. ಎಲ್ಲಿ ಜಲಸಮೃದ್ಧಿ ಇದೆಯೋ, ಎಲ್ಲಿ ಏತ್ತರದ ಬೆಟ್ಟ ಗುಡ್ಡಗಳು ತಮ್ಮ ಶಿಖರದ ಪೀಠಭೂಮಿಯಲ್ಲಿ ವನಪ್ರದೇಶಗಳನ್ನು ಸೃಷ್ಟಿಸಿಕೊಂಡಿವೆಯೋ ಅಂತಹ ಪ್ರಕೃತಿರಮ್ಯ ಪ್ರದೇಶಗಳಲ್ಲೆಲ್ಲಾ ದೇವಾಲಯಗಳನ್ನು ನಿರ್ಮಿಸುವುದು ಭಾರತೀಯರ ಸಂಸ್ಕೃತಿ, ಅಂತೆಯೇ ಈ ಗುಡಿಯು ಎತ್ತರ ಶಿಖರದ ಪದತಲದಲ್ಲಿ ವನಸಿರಿಯ ಸುಂದರ ತಾಣದಲ್ಲಿ ತಲೆ ಎತ್ತಿನಿಂತಿದೆ.


ನಳೀಲು ಎಂಬುದು ಈ ಕ್ಷೇತ್ರಕ್ಕಿರುವ ಸ್ಥಳ ನಾಮ. ಪ್ರಾಚೀನ ಕಾಲದ ಜನರು ಪ್ರಾಕೃತಿಕ ವಿಶೇಷತೆಗಳನ್ನು ಪರಿಗಣಿಸಿಯೇ ಊರಿಗೆ ಹೆಸರಿಡುತ್ತಿದ್ದರು. ನಾಲ್+ಇಲ್ಲ್ ಎಂಬೆರಡು ಪದಗಳು ಸೇರಿ ನಳೀಲು ಆಗಿದೆ. ತುಳುವಿನಲ್ಲಿ ನಾಲ್ ಎಂದರೆ ನಾಲ್ಕು ಇಲ್ಲ್ ಎಂದರೆ ಮನೆ. ಪೂರ್ವದಲ್ಲಿ ನಾಲ್ಕೇ ಮನೆಗಳಿದ್ದಿರಬಹುದು. ಅವು ಒಂದೇ ಮನೆತನಕ್ಕೆ ಸೇರಿದವುಗಳಾಗಿರಬಹುದು. ಪ್ರಾಕೃತಿಕವಾಗಿ ಈ ಪಾಲ್ತಾಡಿ ಬಯಲು ನೆಟ್ಟಾರಿನಿಂದ ಪ್ರಾರಂಭಗೊಂಡು ಮಣಿಕ್ಕಾರ ದಾಟಿ ನಳೀಲು, ಬೊಳಿಯಾಲ ದಾಟಿ ಅಂಗಡಿ ಹಿತ್ತಿಲ ವರೆಗ ಮುಂದುವರಿದು ಪಲ್ಲತಡ್ಕದಲ್ಲಿ ಕೊನೆಗೊಳ್ಳುತ್ತದೆ. ನಳೀಲು ಈ ಪಾಲ್ತಾಡಿ ಬಯಲಿನ ಮಧ್ಯ ಭಾಗದಲ್ಲಿದೆ.
ಸರಕಾರ ಈ ಬಯಲನ್ನು ಇಬ್ಬಾಗಿ ಮಾಡಿ ಮೇಲಿನ ಭಾಗವನ್ನು ಕೊಳ್ತಿಗೆ ಗ್ರಾಮಕ್ಕೆ ಸೇರಿಸಿದೆ. ಕೆಳಗಿನ ಭಾಗ ಪಾಲ್ ತ ಅಡಿ (ಪಾಲಿನ ಕೆಳ ಭಾಗ) ಯಾಗಿ ಪಾಲ್ತಾಡಿಯಾಗಿಯೇ ಉಳಿದಿದೆ. ಕೊಳ್ತಿಗೆ ಗ್ರಾಮಕ್ಕೆ ಸೇರಿದ ಮೇಲಿನ ಭಾಗ ಪ್ರಾಕೃತಿಕವಾಗಿ ಈ ಬಯಲಿನ ಮೇಲ್ಭಾಗವೇ ಆಗಿರುವುದರಿಂದ ಅಲ್ಲಿನ ಜನರು ಹೆಸರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪಾಲ್ತಾಡು ಎಂಬುದಾಗಿ ಪರಿವರ್ತಿಸಿಕೊಂಡಿದ್ದಾರೆ. ಅದು ರೂಢಿಯ ಆಡು ಭಾಷೆಯ ಪದ. ಬ್ರಿಟಿಷರ ಕಾಲದ ದಾಖಲೆಗಳಿಂದ ಹಿಡಿದು ಈ ವರೆಗಿನ ಸರಕಾರಿ ದಾಖಲೆಗಳೆಲ್ಲದರಲ್ಲೂ ಗ್ರಾಮದ ಹೆಸರು ಪಾಲ್ತಾಡಿ ಎಂದಿದೆಯೇ ಹೊರತು ಪಾಲ್ತಾಡು ಎಂದು ಎಲ್ಲೂ ನಮೂದಿತವಾಗಿಲ್ಲ. ಈಗ ಈ ಪಾಲ್ತಾಡಿ ಗ್ರಾಮಕ್ಕೆ ಪ್ರಾಕೃತಿಕ ಸಂಬಂಧವಿಲ್ಲದ, ಮಧ್ಯೆ ಬರುವ ರಸ್ತೆಯಿಂದಾಚೆ ಭಾಗದ ಬಂಬಿಲ – ಪರಣೆ ಬಯಲನ್ನು ಸೇರಿಸಲಾಗಿದೆ.
ಕೊಳ್ತಿಗೆ ಗ್ರಾಮಕ್ಕೊಳಪಟ್ಟ ಭೂಭಾಗವೂ ಸೇರಿದಂತೆ ಒಟ್ಟು ಪಾಲ್ತಾಡಿಯನ್ನು ಮೇಲಿನ ಪಾಲ್ತಾಡಿ ಕೆಳಗಿನ ಪಾಲ್ತಾಡಿ ಎಂಬ ಎರಡು ವಿಭಾಗ ಮಾಡುತ್ತಾರೆ. ಈ ವಿಭಜನೆಯ ಮಧ್ಯಭಾಗದಲ್ಲಿ ನಳೀಲು ಇದೆ. ಮೇಲಿನ ಭಾಗದಲ್ಲಿ ಬಂಟ ಮನೆತನಕ್ಕೆ ಸೇರಿದ ನಾಲ್ಕು ಮನೆಗಳಿದ್ದರೆ, ಕೆಳಗಿನ ಪಾಲ್ತಾಡಿಯಲ್ಲಿ ಗುತ್ತಿಗೆ ಮನೆ, ದೊಡ್ಡಮನೆ, ಕೆಳಗಿನ ಮನೆ, ಖಂಡಿಗೆ, ಬೊಳಿಯಾಲ, ಅಂಗಡಿಹಿತ್ಲು ಎಂಬ ಬೇರೆ ಬೇರೆ ಜಾತಿಗೆ ಸೇರಿದ ಆರು ಮನೆಗಳು ಪೂರ್ವಕಾಲದಲ್ಲಿದ್ದಿರಬೇಕು. ಹೀಗೆ ಹತ್ತು ಮನೆಗಳವರು ಸೇರಿ ಒಂದು ಪ್ರದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
ನಳೀಲು ಕೇಂದ್ರವಾಗಿ ಇರುವಂತೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಆರಾಧನಾ ಕೇಂದ್ರಗಳು ಈಗಲೂ ಇವೆ. ಉತ್ತರದ ಮಣಿಕ್ಕಾರದಲ್ಲಿ ವಿಷ್ಣು ದೇವಾಲಯ, ದಕ್ಷಿಣದಲ್ಲಿ ಉಳ್ಳಾಗುಳು ದೈವಸ್ಥಾನ, ಪೂರ್ವದಲ್ಲಿ ಬಾಯಂಬಾಡಿ ಷಣ್ಮುಗ ದೇವಾಲಯ ಮತ್ತು ಪಶ್ಚಿಮದಲ್ಲಿ ವಿಷ್ಣುಮೂರ್ತಿ ದೈವದಗುಡಿ ಈ ನಾಲ್ಕು ಆರಾಧನಾ ಕೇಂದ್ರಗಳೇ ಬಯಲಿನ ವಿಸ್ತಾರದ ಮಿತಿಯನ್ನು ನಿಗದಿಗೊಳಿಸುತ್ತವೆ. ಈ ಕ್ಷೇತ್ರದ ಪಕ್ಕದ ಪೆರುವಾಜೆ ಗ್ರಾಮದಲ್ಲಿ ಜಲದುರ್ಗೆಯ ದೊಡ್ಡ ದೇವಾಲಯವಿದೆ. ಅದು ಒಂದು ಕಾಲದಲ್ಲಿ ಮಾಗಣೆ ದೇವಾಲಯವಾಗಿ ಪ್ರಸಿದ್ಧಿ ಹೊಂದಿತ್ತು. ಸಾಮಾನ್ಯವಾಗಿ ಜಲಸಮೃದ್ಧಿ ಹೊಂದಿದ ಪ್ರದೇಶಗಳಲ್ಲಿ ಜಲದುರ್ಗೆ ಮತ್ತು ವಿಷ್ಣು ಸಂಬಂಧೀ ದೇವಾಲಯಗಳಿದ್ದರೆ, ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶಗಳಲ್ಲಿ ವನದುರ್ಗೆ ಮತ್ತು ಶಿವ ಸಂಬಂಧೀ ದೇವಾಲಯಗಳಿರುತ್ತವೆ. ಷಣ್ಮುಗ ದೇವಾಲಯಗಳು ಎರಡೂ ಕಡೆಗಳಲ್ಲೂ ಇರುತ್ತವೆ. ಪಾಲ್ತಾಡಿ ಜಲಸಮೃದ್ಧಿ ಹೊಂದಿ ಪೆರುವಾಜೆಯ ಜಲದುರ್ಗೆಯ ಅಧೀನದಲ್ಲಿದ್ದುದರಿಂದಲೋ ಏನೋ ವಿಷ್ಣು ಮತ್ತು ಷಣ್ಮುಗನನ್ನೇ ಇಲ್ಲಿನ ಜನರು ಆರಾಧ್ಯ ದೇವರುಗಳಾಗಿ ಪರಿಗಣಿಸಿಕೊಂಡಿರಬೇಕು. ನೆರೆಯ ಗ್ರಾಮವಾದ ಕೆಯ್ಯೂರಿನಲ್ಲಿರುವ ವನದುರ್ಗೆಯೊಂದಿಗೆ ಈ ಗ್ರಾಮ ಸಂಬಂಧವನ್ನಿಟ್ಟುಕೊಂಡಂತೆ ಕಂಡು ಬರುವುದಿಲ್ಲ.


ಕೃಷಿ ಮಾಡಲು ಮಣ್ಣು ಮತ್ತು ನೀರು ಇವೆರಡು ಅತ್ಯವಶ್ಯಕ. ಮಣ್ಣಿನ ಅಧಿದೇವತೆ ನಾಗ, ಮಣ್ಣಿನ ಮನೆ ಹುತ್ತದಲ್ಲೇ ಆತನ ವಾಸ. ನೀರಿನ ಅಧಿದೇವತೆ ಯಕ್ಷ, ಹೀಗೆ ತುಳುನಾಡಿನಲ್ಲಿ ನಾಗಾರಾಧನೆ ಮತ್ತು ಯಕ್ಷಾರಾಧನೆ ಪೂರ್ವಕಾಲದಿಂದಲೂ ಬೆಳೆದು ಬಂದ ಸಂಸ್ಕೃತಿ. ಕೃಷಿ ಬೆಳೆಸಿದರಷ್ಟೇ ಸಾಲದು, ಅದು ಬೆಳೆದು ಫಲ ಕೊಡುವ ವರೆಗೆ ರಕ್ಷಣೆಯೂ ಅತ್ಯಗತ್ಯ. ರಕ್ಷಣೆಗಾಗಿ ಇಲ್ಲಿನ ಜನರು ಭೂತಾರಾಧನೆಯನ್ನು ಮಾಡಿದರು. ಯಕ್ಷಾರಾಧನೆ ತುಳು ಸಂಸ್ಕೃತಿಯಿಂದ ನಶಿಸಿಹೋದರೂ ಉಳಿದೆರಡು ಆರಾಧನಾ ಪದ್ಧತಿ ಈಗಲೂ ಇದೆ. ಅಂತೆಯೇ ಪಾಲ್ತಾಡಿಯ ಜನರೂ ಅದನ್ನು ಉಳಿಸಿಕೊಂಡಿದ್ದಾರೆ. ಊರಿನ ಒಂದು ಭಾಗದಲ್ಲಿ ವಿಷ್ಣುವನ್ನು ದೇವರ ರೂಪದಲ್ಲಿ ಕಂಡರೆ ಇನ್ನೊಂದು ದಿಕ್ಕಿನಲ್ಲಿ ದೈವವಾಗಿ ಆರಾಧಿಸುತ್ತಾರೆ. ಷಣ್ಮುಗ ಒಂದು ಕಡೆ ದೇವರಾಗಿದ್ದರೆ ಮತ್ತೊಂದೆಡೆ ನಾಗನಾಗಿದ್ದಾನೆ. ಇಡೀಯ ಊರಿನ ರಕ್ಷಣೆಗಾಗಿ ಅರಸು ದೈವ ಉಳ್ಳಾಯನಿದ್ದಾನೆ. ಬ್ರಾಹ್ಮಣರನ್ನುಳಿದ ಬಂಟರು, ಗೌಡರು, ಬಿಲ್ಲವರು ಮತ್ತಿತರ ಜಾತಿಯವರೇ ಇಲ್ಲಿ ಹೆಚ್ಚಾಗಿದ್ದುದರಿಂದಲೋ ಏನೋ ವೈದಿಕ ಸಂಸ್ಕೃತಿ ಇತ್ತೀಚೆಗಷ್ಟೇ ಹರಡಿದಂತೆ ಕಾಣುತ್ತದೆ. ವೈದಿಕ ಸಂಸ್ಕೃತಿಯ ಶಿಷ್ಟ ಸಂಪ್ರದಾಯಕ್ಕೊಳಪಡದೆ ಜಾನಪದೀಯ ಜೀವನವನ್ನೇ ಜನರು ನಡೆಸುತ್ತಿದ್ದಾರೆ. ನಾಗಾರಾಧನೆ, ಭೂತಾರಾಧನೆಗೇನೇ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಮುಗ್ಧ ಧಾರ್ಮಿಕ ಮನೋಭಾವನೆಯನ್ನು ಉಳಿಸಿಕೊಂಡಿದ್ದಾರೆ.
ತುಳುನಾಡು ವಿಜಯನಗರದ ಆಳ್ವಿಕೆಗೆ ಒಳಪಟ್ಟಿದ್ದಾಗ ಇಲ್ಲಿನ ಆಡಳಿತೆಯನ್ನು ಜೈನ ಸಾಮಂತರಸರು ನೋಡಿಕೊಳ್ಳುತ್ತಿದ್ದರು. ಬೆಳ್ಳಾರೆ, ಪುತ್ತೂರು, ಪರ್ಮಲೆ, ಅಮರ ಸುಳ್ಯ, ಪಂಜ, ಎಣ್ಣೂರು, ಕಡಬ, ಮರ್ದಾಳ, ನೆಲ್ಯಾಡಿ, ನೇರಂಕಿ, ಕೊಂಬಾರು, ರೆಂಜಲಾಡಿ – ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 91 ಮಂದಿ ಬಲ್ಲಾಳರು ವಿಜಯನಗರದ ಸಾಮಂತರಾಗಿ ತುಂಡರಸರಾಗಿ ಆಳ್ವಿಕೆ ನಡೆಸುತ್ತಿದ್ದರೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಇವುಗಳಲ್ಲಿ ಬೆಳ್ಳಾರೆ ಅತ್ಯಂತ ಪ್ರಸಿದ್ದಿ ಪಡೆದ ಒಂದು ವಲಯವಾಗಿತ್ತು ಬೆಳ್ಳಾರೆ ಸೀಮೆಗೆ 21 ಗ್ರಾಮಗಳು ಸೇರಿದ್ದುವು. ಒಂದೇ ಒಂದು ಗ್ರಾಮವನ್ನೊಳಗೊಂಡ ಕೊಂಬಾರಿಗೂ ಕೂಡಾ ಒಬ್ಬ ಪ್ರತ್ಯೇಕ ಬಲ್ಲಾಳನಿದ್ದನು. ಪಾಲ್ತಾಡಿ ಗ್ರಾಮವು ಆಗ ಬೆಳ್ಳಾರೆ ಸೀಮೆಗೊಳಪಟ್ಟಿತ್ತು ಈ ಬಲ್ಲಾಳರುಗಳು ತಾಯಿ ಮೂಲವಾದ ಅಳಿಯಕಟ್ಟನ್ನು ಆಚರಿಸುವವರಾದರೂ ತಮ್ಮ ತಂದೆಯ ಕುಲದ ಬಂಗ, ಚೌಟ, ಆಜಿಲ, ಕಂಬಳಿ, ಭೈರರಸ ಮುಂತಾದ ಜೈನ ಕುಲ ನಾಮಗಳನ್ನು ಬಳಸಿಕೊಳ್ಳುತ್ತಿದ್ದರು. ಈ ತುಂಡರಸರುಗಳು ಸುಮಾರು ಹದಿನೆಂಟನೆಯ ಶತಮಾನದವರೆಗೆ, ಬ್ರಿಟಿಷರ ಅಧೀನಕ್ಕೊಳಪಟ್ಟು ಸ್ವತಂತ್ರರಾಗಿ ತಮಗೆ ಸೇರಿದ ಗ್ರಾಮಗಳ ಆಡಳಿತ ನಡೆಸುತ್ತಿದ್ದರು.
ಪಾಲ್ತಾಡಿ ಗ್ರಾಮವು ಬೆಳ್ಳಾರೆ ಸೀಮೆಗೊಳಪಟ್ಟರೂ ಪ್ರತ್ಯೇಕ ಒಳ ಆಡಳಿತಕ್ಕೆ ಒಳಪಟ್ಟಿರಬೇಕು. ಆಗಿನ ಪಾಲ್ತಾಡಿ ಗ್ರಾಮವನ್ನು ಸುತ್ತುವರಿದ ಒಂದು ಮಣ್ಣಿನ ಕೋಟೆಯ ಅವಶೇಷಗಳು ಇದನ್ನು ರುಜುಪಡಿಸುತ್ತವೆ. ಇದೀಗ ಜನರ ಬಾಯಲ್ಲಿ ಪಾಂಡವರ ಕೋಟೆ (ಅಗಳು)ಯಾಗಿದೆ. ಈ ಕೋಟೆಯ ಬುರುಜೊಂದು ನಳೀಲು ದೇವಾಲಯದ ಹಿಂದಿನ ಎತ್ತರವಾದ ಗುಡ್ಡದ ಮೇಲಿದೆ. ಈ ಬುರುಜನ್ನೇರಿ ನೋಡಿದರೆ ಬೆಳ್ಳಾರೆ ಸೀಮೆಗೆ ಸೇರಿದ 21 ಗ್ರಾಮಗಳು ಕೂಡಾ ಕಾಣುತ್ತವೆ.


ಪಾಲ್ತಾಡಿಯಲ್ಲಿ ಬಂಗರಸರ ವಂಶದವರು ನೆಲೆಸಿದ್ದರು ಎಂಬ ಬಗ್ಗೆ ಹಲವಾರು ಐತಿಹ್ಯಗಳಿವೆ. ಪಾಲ್ತಾಡಿಯ ಮೇಲಿನ ಭಾಗವಾದ ಈಗ ಪಾಲ್ತಾಡ್ ಎಂದು ಕರೆಯಲ್ಪಡುವ ಜಾಗವು ಬಂಗರಸ ಮನೆತನದ ಸಹೋದರಿಯರಿಬ್ಬರ ನೆಲೆಯಾಗಿತ್ತು, ಅಲ್ಲಿ ಅಚ್ಚು ಬಂಗೆತಿ ಮತ್ತು ಮೆಚ್ಚು ಬಂಗೆತಿ ಎಂಬ ಸಹೋದರಿಯರಿಬ್ಬರು ಆಡಳಿತ ನಡೆಸುತ್ತಿದ್ದರು. ಅಲ್ಲಿ ಈಗಲೂ ಊರ ಪಟೇಲರ ಮನೆ ಇದೆ. ಗದ್ದೆಗೆ ಪೂಕರೆ ಹಾಕುವ ಕ್ರಮವಿದೆ. ಈ ಸಂದರ್ಭದಲ್ಲಿ ಈ ಬಂಗರಸ ಸಹೋದರಿಯರಿಗೆ ತಂಬಿಲ ಕೊಡುವ ಪದ್ಧತಿ ಇತ್ತು.
ಪಾಲ್ತಾಡಿಗೆ ಉಳ್ಳಾಕುಲು ಗ್ರಾಮ ದೈವ. ಸಾಮಾನ್ಯವಾಗಿ ಅವಳಿ ಗ್ರಾಮ ದೈವಗಳನ್ನು ಉಳ್ಳಾಕುಲು ಎಂದು ಕರೆಯುವುದು ರೂಢಿ. ಪಾಲ್ತಾಡಿಯಲ್ಲಿ ಇರುವುದು ಒಂದೇ ಗ್ರಾಮ ದೈವ, ಉಳ್ಳಾಯ ಮಾತ್ರ. ಜೈನ ಅರಸರ ಅಳ್ವಿಕೆಗೊಳಪಟ್ಟ ಪ್ರದೇಶದಲ್ಲಿ ಉಳ್ಳಾಯ ಅಥವಾ ಉಳ್ಳಾಲ್ತಿ ಭೂತ ಆರಾಧಿಸಲ್ಪಡುತ್ತಿದ್ದರೆ ಅದು ಗತಿಸಿ ಹೋದ ಜೈನರಸನ ಅಥವಾ ರಾಣಿಯ ಆರಾಧನೆಯಾಗುತ್ತದೆ. ಈ ಪ್ರಕಾರ ಉಳ್ಳಾಕುಲು ಎಂಬ ಜೈನ ಈ ಪ್ರದೇಶವನ್ನು ಆಳುತ್ತಿದ್ದ ಜೈನರಸನೊಬ್ಬನ ಪ್ರತೀಕ, ವೀರಾರಾಧನೆ ಭೂತಾರಾಧನೆಯ ಒಂದು ಭಾಗ, ಉಳ್ಳಾಕುಲು ದೈವದ ಆರಾಧನಾ ಸಂದರ್ಭದಲ್ಲಿ ನಡೆಸುವ ಪಯ್ಯೊಲಿ ಎಂಬ ಅಣಕ ಸಮರದ ಆಚರಣೆ ಇದನ್ನು ಸ್ಪಷ್ಟಪಡಿಸುತ್ತದೆ. ಹೀಗೆ ಈ ಗ್ರಾಮ ಒಂದು ಕಾಲದಲ್ಲಿ ಮಣಿಕ್ಕಾರದಿಂದ ಹಿಡಿದು ಕೆಳಗಿನ ಪಾಲ್ತಾಡಿಯ ಅಂಗಡಿ ಹಿತ್ತಿಲಿನವರೆಗೆ ಒಂದೇ ಆಗಿತ್ತು ಮತ್ತು ಜೈನರಸರ ಆಳ್ವಿಕೆಗೆ ಒಳಪಟ್ಟಿತ್ತು ಮೇಲಿನ ಪಾಲ್ತಾಡಿ ಸಹೋದರಿಯರಿಗೆ ಸೇರಿದ್ದರೆ ಕೆಳಗಿನ ಪಾಲ್ತಾಡಿ ಸಹೋದರನಿಗೆ ಸೇರಿತ್ತು.
ಸಹೋದರ ಬಂಗರಸನ ಬೀಡು ಈಗಿನ ಖಂಡಿಗೆ ಎಂಬಲ್ಲಿ ಇದ್ದಿರಬೇಕು. ಖಂಡಿಗೆ ಈಗ ಗೌಡ ಮನೆತನದ್ದಾಗಿದೆ. ಈ ಮನೆಯ ಉತ್ತರ ದಿಕ್ಕಿಗೆ ಕೆರೆ ತೋಡುವಾಗ ಸುಮಾರು ನಾಲ್ಕು ಅಡಿ ಎತ್ತರದ ಬಳಪದ ಕಲ್ಲಿನ ತೀರ್ಥಂಕರ ಮೂರ್ತಿಯೊಂದು ಮಣ್ಣಡಿಯಲ್ಲಿ ದೊರೆತಿರುವುದು ಇಲ್ಲೊಂದು ಬಸದಿ ಇತ್ತೆಂಬುದನ್ನು ದೃಢಪಡಿಸುತ್ತದೆ. (ಮೂರ್ತಿಯನ್ನು ವಿವೇಕಾನಂದ ಕಾಲೇಜಿನ ವಸ್ತು ಸಂಗ್ರಹಾಲಯಕ್ಕೆ ಒಪ್ಪಿಸಲಾಗಿತ್ತು, ಇಲ್ಲಿದ್ದ ಜೈನ ಮನೆತನ ನಾಶವಾಗಿ ಹೋಗುವಾಗ ಅಳಿದುಳಿದ ಮಹಿಳೆಯೊಬ್ಬಳು ಖಾನೆಯ ಚಿನ್ನಾಭರಣ ನಾಣ್ಯಗಳನ್ನೆಲ್ಲಾ ಎತ್ತಿಕೊಂಡು ಬಡಗು ದಿಕ್ಕಿಗೆ ಹೋದಳೆಂಬ ದಂತಕತೆಯೂ ಇದೆ. ಮೇಲಿನ ಪಾಲ್ತಾಡಿಯಲ್ಲಿದ್ದ ಅಚ್ಚು-ಮೆಚ್ಚು ಸಹೋದರಿಯರು ಸಹೋದರನೊಡನೆ ಒಳ್ಳೆಯ ಸಂಬಂಧವನ್ನು ಹೊಂದಿದ್ದರು. ಪಾಲ್ತಾಡಿಯಲ್ಲಿ ಬೋಳಿಯಾಲ ಎಂಬೊಂದು ಸ್ಥಳವಿದೆ. ಆಲ ಎಂದರೆ ನೀರು. ಬೊಳಿಯ ಎಂದರೆ ಬಿಳಿಯ ಅಥವಾ ನಿರ್ಮಲವಾದ ಎಂದರ್ಥ, ಬೊಳೆಯಾಲ ಎಂದರೆ ಪರಿಶುದ್ಧ ನೀರಿನ ಜಲಾಶಯವಿರುವ ಸ್ಥಳ. ಇಲ್ಲಿ ಪ್ರಾಚೀನ ಕಾಲದಲ್ಲಿ ವಿಶಾಲವಾದ ಕೆರೆ ಇದ್ದಿರಬೇಕು. ಈ ಕೆರೆಗೆ ಅಚ್ಚು-ಮೆಚ್ಚು ಸಹೋದರಿಯರು ಬಂದು ಸ್ನಾನ ಮಾಡಿ ಹೋಗುತ್ತಿದ್ದರು ಎಂಬ ಬಗ್ಗೆ ದಂತಕತೆಯೂ ಇದೆ. ಪಾಲ್ತಾಡಿಯ ಕೊನೆಯ ತುದಿಯಲ್ಲಿ ಅಂಗಡಿ ಹಿತ್ತಿಲು ಇದೆ. ಹೆಸರೇ ಸೂಚಿಸುವಂತೆ ಇದು ಪಾಲ್ತಾಡಿ ಗ್ರಾಮದ ಪ್ರಾಚೀನ ಕಾಲದ ವ್ಯಾಪಾರ ಕೇಂದ್ರ, ಇಲ್ಲಿ ಈಗ ನೆಲೆಸಿರುವ ಗೌಡ ಮನೆತನದವರು ಇತ್ತೀಚೆಗಿನವರೆಗೂ ತಮ್ಮ ತಮ್ಮ ಮನೆಗಳಲ್ಲೇ ವ್ಯಾಪಾರ ನಡೆಸುತ್ತಿದ್ದುದು ಇದಕ್ಕೆ ಆಧಾರವಾಗಿದೆ.


ಪಾಲ್ತಾಡಿ ಬಯಲಿನಲ್ಲಿ ಈಗ ಜೈನರ ಮನೆಗಳಿಲ್ಲ. ಆದರೆ ಈ ಬಯಲಿನ ವಾಯವ್ಯ ಭಾಗದಲ್ಲಿ ಪಾಲ್ತಾಡಿ ಗ್ರಾಮಕ್ಕೆ ಸೇರಿದ ಚೆನ್ನಾವರ ಎಂಬಲ್ಲಿ ಜೈನರ ಮನೆಗಳಿವೆ. ಚೆನ್ನಾವರ ಎಂದರೆ ಸುಂದರವಾದ ಪರಿಸರ ಉಳ್ಳ ಸ್ಥಳ ಎಂದರ್ಥ. ಇಲ್ಲಿರುವ ಮನೆತನ ಅತ್ಯಂತ ಪ್ರಾಚೀನ ಎಂಬುದಕ್ಕೆ ಕೆಲವು ವರ್ಷಗಳ ಹಿಂದೆ ಮನೆಯ ತಳಪಾಯದಲ್ಲಿ ಅಗೆಯುವಾಗ ದೊರೆತ ಚಿನ್ನದ ನಾಣ್ಯಗಳು ಸಾಕ್ಷಿ ನೀಡಿವೆ.
ಪಾಲ್ತಾಡಿ ಗ್ರಾಮದ ಪೂರ್ವ ಮತ್ತು ಪಶ್ಚಿಮ ಭಾಗಗಳೆರಡು ಕೂಡುವ ಆಗಲ ಕಿರಿದಾದ ಭಾಗದಲ್ಲಿ ಒಂದು ಮೈದಾನ (ಅಡ್ಕ)ವಿದೆ. ಈ ಮೈದಾನಕ್ಕೆ ಅಂಕತಡ್ಕ ಎಂಬ ಹೆಸರಿದೆ. ಅಂಕ ಎಂದರೆ ಸ್ಪರ್ಧೆ, ಯುದ್ಧ ಎಂಬರ್ಥವಿದೆ. ಈ ಮೈದಾನದಲ್ಲಿ ಹಿಂದೆ ಎರಡು ಸೀಮೆಯವರ ಮಧ್ಯೆ ಆಗಾಗ ಹೋರಾಟ ನಡೆಯುತ್ತಿದ್ದುದರಿಂದಲೇ ಇದಕ್ಕೆ ಅಂಕತಡ್ಕ ಎಂಬ ಹೆಸರು ಬಂದಿದೆ. ಹಿಂದೆ ಇಲ್ಲಿ ನಡೆಯುತ್ತಿದ್ದ ಸಮರದ ಸಾಂಕೇತಿಕವಾಗಿ ಈಗ ಅಲ್ಲಿ ಕೋಳಿಅಂಕ ನಡೆಯುತ್ತದೆ. ಒಟ್ಟಿನಲ್ಲಿ ಮಣ್ಣಿಗೆ ರಕ್ತ ತರ್ಪಣ ಆಗಲೇ ಬೇಕೆಂಬುದು ಜನಪದರ ನಂಬಿಕೆ. ಚೆನ್ನಾವರದಿಂದ ಪಶ್ಚಿಮಕ್ಕೆ ಮುಂದುವರಿದರೆ ಕೊನೆಗೆ ಸಿಗುವುದೇ ಸವಣೂರು, ಶ್ರವಣರ ಊರು ಈಗ ಸವಣೂರು ಆಗಿದೆ. ಪಾಲ್ತಾಡಿಯನ್ನೊಳಗೊಂಡಂತೆ ಈ ಕಡೆಯ ಎಲ್ಲಾ ಜೈನರಿಗೂ ಒಂದು ಕಾಲದಲ್ಲಿ ಸವಣೂರು ಧಾರ್ಮಿಕ ಕೇಂದ್ರವಾಗಿತ್ತು. ಈಗಲೂ ಅಲ್ಲಿ ಪ್ರಸಿದ್ದಿ ಪಡೆದ ಜೈನ ಬಸದಿ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯನಿಗೂ ನಾಗನಿಗೂ ಅಭೇದ ಸಂಬಂಧ ಕಲ್ಪಿಸುತ್ತಾರೆ. ನಳೀಲಿನಲ್ಲಿ ಮೂಲತಃ ಸುಬ್ರಹ್ಮಣ್ಯನದ್ದೇ ಗುಡಿ ಜೈನರಸರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರಬೇಕು. ಕನಿಷ್ಟ ಈ ಗುಡಿಗೆ 300 ವರ್ಷಗಳ ಇತಿಹಾಸವಿದೆ. ಗುಡಿಯು ಪಾಳುಬಿದ್ದಾಗ ಗರ್ಭಗುಡಿಯೊಳಗೆ ಮೂರ್ತಿಯ ಸುತ್ತ ಹುತ್ತ ಬೆಳೆಯಿತು. ಗರ್ಭಗುಡಿಯನ್ನೆಲ್ಲಾ ಆವರಿಸಿತು.
ಈಗ ಹುತ್ತಕ್ಕೇನೇ ಪೂಜೆ ಸಲ್ಲುತ್ತದೆ. ಸುಬ್ರಹ್ಮಣ್ಯನ ಆರಾಧನೆಯು ನಾಗಾರಾಧನೆಯಾಗಿ ಪರಿವರ್ತನೆಗೊಂಡಿದೆ. ದಿನನಿತ್ಯ ಅರ್ಚಕರು ನಾಗನಿಗೆ ಪೂಜೆ ಸಲ್ಲಿಸಿ ಬಟ್ಟಲಲ್ಲಿ ಹಾಲು – ನೀರಿಟ್ಟು ಬರುತ್ತಾರೆ. ಬಟ್ಟಲಲ್ಲಿದ್ದ ಹಾಲನ್ನು ನಾಗ ಕುಡಿಯುತ್ತಾನೆ ಎಂಬುದು ನಂಬಿಕೆ. ಆಳೆತ್ತರಕ್ಕೆ ನಿಂತ ವಲ್ಮೀಕ ಕೆಲವೊಮ್ಮೆ ಪವಾಡದಂತೆ ಕುಬ್ಬಗೊಳ್ಳುವುದೂ ಇದೆ. ನಾಗ ಇಲ್ಲಿ ಆರಾಧ್ಯ ದೈವವಷ್ಟೇ ಅಲ್ಲ ಅಲ್ಲಲ್ಲಿ, ಆಗಾಗ ಪ್ರತ್ಯಕ್ಷವಾಗಿಯೂ ಕಾಣಿಸಿಕೊಳ್ಳುತ್ತಾನೆ. ಅದಿಸುಬ್ರಹ್ಮಣ್ಯದಲ್ಲಿ ನಾಗನ ಹುತ್ತಕ್ಕೆ ಪೂಜೆ ಸಲ್ಲುತ್ತದೆ. ಅದೇ ಮಾದರಿಯ ಆರಾಧನಾ ಪದ್ಧತಿ ಇಲ್ಲೂ ಮುಂದುವರಿಯುತ್ತದೆ. ಈ ದೃಷ್ಟಿಯಿಂದ ನಳೀಲು ಎರಡನೆಯ ಸುಬ್ರಹ್ಮಣ್ಯ ಎಂದರೂ ತಪ್ಪಾಗಲಾರದು. ಪ್ರಕೃತಿರಮ್ಯ ಪ್ರದೇಶದಲ್ಲಿ ತಲೆಎತ್ತಿ ನಿಂತ ಈ ದೇವಾಲಯ ಮತ್ತೊಮ್ಮೆ ಎಲ್ಲಾ ಕಡೆಗಳಿಂದಲೂ ಭಕ್ತಮಹಾಶಯರನ್ನು ಕೈನೀಡಿ ಕರೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅಚ್ಚುಮೆಚ್ಚಿನ ಪಾಲ್ತಾಡಿ
ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ (ವಲ್ಮೀಕ ಬ್ರಹ್ಮಕಳಶೋತ್ಸವ ಸ್ಮರಣ ಸಂಚಿಕೆ, ೨೦೦೪, ಪುಟ ೯-೧೨)